ದಾಸಪ್ಪ, ಎಚ್ ಸಿ
1894-1964. ಹಳೆಯ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರಕ್ಕಾಗಿ ಹೋರಾಟ ನಡಸಿದವರಲ್ಲಿ ಒಬ್ಬರು. ಮಡಿಕೇರಿಯಲ್ಲಿ 1894ರ ಡಿಸೆಂಬರ್ 5ರಂದು ಜನಿಸಿದರು. ತಂದೆ ಚೆನ್ನಯ್ಯ; ತಾಯಿ ತಿಮ್ಮಮ್ಮ. ದಾಸಪ್ಪನವರ ಪೂರ್ವಿಕರ ಸ್ಥಳ ಹಿಂದಿನ ಮೈಸೂರು ಸಂಸ್ಥಾನದ ಹಿರಳ್ಳಿ. ಚೆನ್ನಯ್ಯನವರು ಮಡಿಕೇರಿಯಲ್ಲಿ ನ್ಯಾಯಾಧೀಶರಾಗಿದ್ದರು. ಅವರಿಗೆ ಬ್ರಿಟಿಷ್ ಸರ್ಕಾರದಿಂದ ರಾವ್ ಸಾಹೇಬ್ ಬಿರುದು ದೊರಕಿತ್ತು. ಚೆನ್ನಯ್ಯನವರು ಕೆಲಸದಿಂದ ನಿವೃತ್ತರಾದ ಮೇಲೆ ಬೆಂಗಳೂರಿಗೆ ಬಂದು ನೆಲಸಿದರು. ಸಂಸ್ಥಾನದಲ್ಲಿ ಹಿಂದುಳಿದ ವರ್ಗದ ಏಳಿಗೆಗಾಗಿ ಆರಂಭವಾದ ಜಸ್ಟಿಸ್ ಚಳವಳಿಯ ಪ್ರವರ್ತಕರಲ್ಲಿ ಚೆನ್ನಯ್ಯನವರೂ ಒಬ್ಬರು. ಎಚ್. ಸಿ. ದಾಸಪ್ಪನವರು ಮಹಾರಾಜ ಕಾಲೇಜಿನಲ್ಲಿ ಇಂಟರ್‍ಮೀಡಿಯೆಟ್ ಪರೀಕ್ಷೆ ಮುಗಿಸಿ ಮದರಾಸಿನಲ್ಲಿ ಬಿ.ಎ. ಪದವಿ ಪಡೆದರು. ಅನಂತರ ಮುಂಬಯಿಗೆ ತೆರಳಿ ಅಲ್ಲಿ ನ್ಯಾಯಶಾಸ್ತ್ರದ ಪರೀಕ್ಷೆ ಮಾಡಿದರು. 1919ರಲ್ಲಿ ಬೆಂಗಳೂರಿನಲ್ಲಿ ವಕೀಲರಾಗಿ ಉದ್ಯೋಗವನ್ನು ಆರಂಭಿಸಿದರು. 1921ರಲ್ಲಿ ಅವರು ಮೈಸೂರಿಗೆ ಬಂದು ನೆಲಸಿ ವಕೀಲ ವೃತ್ತಿಯನ್ನೂ ಸಾರ್ವಜನಿಕ ಸೇವಾಕಾರ್ಯವನ್ನೂ ಮುಂದುವರಿಸಿದರು. ಇವರು 1926ರಲ್ಲಿ ಸಮಾಜ ಸುಧಾರಕ ಕೆ.ಎಚ್.ರಾಮಯ್ಯನವರ ಮಗಳು ಯಶೋಧರಮ್ಮನವರನ್ನು ವಿವಾಹವಾದರು.

1937ರವರೆಗೆ ಸಂಯುಕ್ತ ಪ್ರಜಾಪಕ್ಷದ ಮುಖಂಡರಾಗಿ, ಮೈಸೂರು ಪುರಸಭೆ ಹಾಗೂ ಸಂಸ್ಥಾನದ ನ್ಯಾಯವಿಧಾಯಕ ಸಭೆಯ ಸದಸ್ಯರಾಗಿ, ಹಲವು ವರ್ಷಗಳ ಕಾಲ ಇವರು ಸೇವೆ ಸಲ್ಲಿಸಿದರು. ಹಿಂದುಳಿದ ವರ್ಗಗಳ ಮುನ್ನಡೆಗೆ ನಡೆದ ಚಳವಳಿಯ ನಾಯಕರಾಗಿದ್ದ ದಾಸಪ್ಪನವರು 1937ರಲ್ಲಿ ಮೈಸೂರು ಸಂಸ್ಥಾನ ಕಾಂಗ್ರೆಸ್ ಸೇರಿದರು. ದಾಸಪ್ಪನವರಿಗೆ 1939ರಲ್ಲಿ ಅದರ ಅಧ್ಯಕ್ಷತೆ ದೊರಕಿತು. ಹಿಂದಿನ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ ನಡೆದ ಸತ್ಯಾಗ್ರಹ ಹೋರಾಟಗಳಲ್ಲೆಲ್ಲ ದಾಸಪ್ಪನವರು ಭಾಗವಹಿಸಿ ಹಲವು ಬಾರಿ ಸೆರೆಮನೆಗೆ ಹೋಗಿದ್ದರು. ದಾಸಪ್ಪನವರ ಚಟುವಟಿಕೆಗಳಿಂದ ಕೆರಳಿದ ಸಂಸ್ಥಾನ ಸರ್ಕಾರ ಅವರ ವಕೀಲಿ ಸನ್ನದನ್ನು ರದ್ದು ಮಾಡಿತು. ಆ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು 1940ರ ಜುಲೈ 13ರ ಹರಿಜನ ಪತ್ರಿಕೆಯಲ್ಲಿ ದಾಸಪ್ಪನವರ ಬಗ್ಗೆ ಈ ರೀತಿ ಬರೆದರು : ಶ್ರೀ ದಾಸಪ್ಪನವರು ಮೈಸೂರಿನ ಅತ್ಯಂತ ಗೌರವಾನ್ವಿತ ವ್ಯಕ್ತಿ. ಇಪ್ಪತ್ತು ವರ್ಷಗಳ ವಕೀಲಿ ಕೆಲಸದ ಅನುಭವವುಳ್ಳವರು. ಮೈಸೂರಿನ ಒಂದು ಭಾಗದಲ್ಲಿ ದಂಡಾಧೀಶರ ಆಜ್ಞೆಯನ್ನು ಉಲ್ಲಂಘಿಸಿ ಭಾಷಣ ಮಾಡಿದ ಕೆಚ್ಚು ಅವರದು. ಜಸ್ಟಿಸ್ ನಾಗೇಶ್ವರ ಐಯರ್ ಅವರಿಂದ ನಡೆಯಲಿದ್ದ ಅಧಿಕೃತ ವಿಚಾರಣೆಯನ್ನು ಬಹಿಷ್ಕರಿಸಬೇಕೆಂದು ರಾಜಕೀಯ ಕೈದಿಗಳಿಗೆ ತಿಳಿಸಿ ಹೇಳುವ ಸಾಹಸ ಮಾಡಿದ್ದರು. ಆ ಕೆಲಸವನ್ನು ಅವರು ನನ್ನ ಸೂಚನೆಯ ಮೇರೆಗೆ ಮಾಡಿದ್ದರು. ಈ ಗುರುತರ ಅಪರಾಧಗಳಿಗಾಗಿ ಶ್ರೀ ದಾಸಪ್ಪನವರು ಎಂದೆಂದಿಗೂ ವಕೀಲಿವೃತ್ತಿಯನ್ನು ಕೈಗೊಳ್ಳದಂತೆ ಮಾಡಲಾಗಿದೆ. ಶ್ರೀ ದಾಸಪ್ಪನವರನ್ನು ನಾನು ಚೆನ್ನಾಗಿ ಬಲ್ಲೆ. ಅವರು ನಿಷ್ಕಳಂಕ ಚಾರಿತ್ರ್ಯವುಳ್ಳವರು; ಅತ್ಯಂತ ಪ್ರಾಮಾಣಿಕರು. ಅವರು ತಮ್ಮ ಕೈಲಾದಮಟ್ಟಿಗೂ ಅಹಿಂಸೆಯನ್ನು ಅನುಸರಿಸಲು ಸ್ಥೈರ್ಯದಿಂದ ಯತ್ನಿಸುತ್ತಿದ್ದಾರೆ. ಬ್ರಿಟಿಷ್ ಭಾರತದ ದೇಶಭಕ್ತ ವಕೀಲರು ಏನು ಮಾಡಿದ್ದಾರೋ ಅಥವಾ ಇತರ ವಕೀಲರು ಏನು ಮಾಡಲಿಲ್ಲವೋ ಅದನ್ನು ಶ್ರೀ ದಾಸಪ್ಪನವರು ಮಾಡಿದ್ದಾರೆ.

ಸ್ವಾತಂತ್ಯ್ರೋತ್ತರ ಕಾಲದಲ್ಲಿ ದಾಸಪ್ಪನವರು ರಾಜಕೀಯ ಹಾಗೂ ವಿಧಾಯಕ ಸೇವಾಕ್ಷೇತ್ರಗಳಲ್ಲಿ ಬಹುವಾಗಿ ದುಡಿದರು. ಶ್ರೀ ರಾಮಕೃಷ್ಣಾಶ್ರಮ, ಕಸ್ತೂರ ಬಾ ಗಾಂಧಿ ಸ್ಮಾರಕ ಸಂಸ್ಥೆ, ಗಾಂಧಿ ಸ್ಮಾರಕ ನಿಧಿ, ಹಿಂದೀ ಪ್ರಚಾರ ಸಭೆ ಮುಂತಾದ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸಿದರು. 1947ರ ಅಕ್ಟೋಬರ್‍ನಿಂದ 1952ರ ವರೆಗೆ ಮೈಸೂರು ರಾಜ್ಯದ ಕೈಗಾರಿಕೆ ಮತ್ತು ಹಣಕಾಸು ಮಂತ್ರಿಯಾಗಿದ್ದರು. 1954ರಲ್ಲಿ ಇವರು ಭಾರತದ ರಾಜ್ಯ ಸಭೆಯ ಸದಸ್ಯರಾದರು. ಅನಂತರ 1957ರ ಮತ್ತು 1962ರ ಮಹಾಚುನಾವಣೆಗಳಲ್ಲಿ ಇವರು ಲೋಕಸಭೆಗೆ ಚುನಾಯಿತರಾಗಿದ್ದರು. ಇವರು ಸಂಸತ್ತಿನ ಅಂದಾಜು ಸಮಿತಿಯ ಅಧ್ಯಕ್ಷರಾಗಿದ್ದರು. 1963ರಲ್ಲಿ ಕೇಂದ್ರ ಮಂತ್ರಿಮಂಡಲದಲ್ಲಿ ರೈಲ್ವೆ ಸಚಿವರಾದರು. ಅನಂತರ ಕೈಗಾರಿಕಾ ಸಚಿವರಾದರು. ಆ ಪದವಿಯಲ್ಲಿರುವಾಗಲೇ 1964ರ ಅಕ್ಟೋಬರ್ 29ರಂದು ದೆಹಲಿಯಲ್ಲಿ ಇವರು ನಿಧನರಾದರು.
(ಬಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ